ದಂತಪುರ - ಕಳಿಂಗದ ಗಂಗರ (ಪೂರ್ವ ಗಂಗ) ರಾಜಧಾನಿಯಾಗಿದ್ದ ಪಟ್ಟಣ. ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿ ವಂಶಧಾರಾ ನದಿಯ ದಡದಲ್ಲಿ ಇತ್ತೆಂದು ತೋರುತ್ತದೆ. ಈ ನದಿಯ ತೀರದಲ್ಲಿ ದಂತಪುರವೆಂಬ ಒಂದು ಹಾಳುಬಿದ್ದ ಕೋಟೆ ಈಗಲೂ ಇದೆ. ಕಳಿಂಗದ ವಂಶದ ಅನೇಕ ರಾಜರು ತಮ್ಮ ಶಾಸನಗಳನ್ನು ಈ ಪಟ್ಟಣದಿಂದ ಬರೆಸಿಕೊಟ್ಟಿದ್ದಾರೆಂಬುದು 11 ನೆಯ ಶತಮಾನದ ಶಾಸನಗಳಿಂದ ತಿಳಿದುಬರುತ್ತದೆ. ಕೆಲವು ಶಾಸನಗಳು ಈ ದಂತಪುರದ ಹೆಸರನ್ನು ಜಂತಾಪುರ ಎಂದೂ ಅದನ್ನು ಒಳಗೊಂಡಿದ್ದ ಪ್ರದೇಶವನ್ನು ಜಂತರುನಾಡು ಎಂದೂ ಕೊಟ್ಟಿವೆ. ಈ ಪಟ್ಟಣ ಗೌತಮ ಬುದ್ಧನ ದಂತಾವಶೇಷಗಳಿದ್ದ ಸ್ಥಳವಾದುದರಿಂದ ಪ್ರಸಿದ್ಧಿಗೆ ಬಂತು. ಇದು ಕಳಿಂಗ ರಾಜ್ಯದ ರಾಜಧಾನಿಯಾಗಿತ್ತೆಂದೂ ಉಜ್ಜಯಿನಿಯ ರಾಜಕುಮಾರನಾದ ದಂತಕುಮಾರ ಈ ಸ್ಥಳದಲ್ಲಿದ್ದ ಬುದ್ದನ ಅವಶೇಷಗಳನ್ನು ಸಿಂಹಳ ದ್ವೀಪಕ್ಕೆ (ಈಗಿನ ಶ್ರೀಲಂಕಾ) ತೆಗೆದಕೊಂಡು ಹೋದನೆಂದೂ ಧರ್ಮಕೀರ್ತಿಯೆಂಬ ಬುದ್ಧ ಭಿಕ್ಷುವಿನ ದರಾವಂಶವೆಂಬ ಗ್ರಂಥದಿಂದ ತಿಳಿದುಬರುತ್ತದೆ. ಈ ಗ್ರಂಥ ಸು. 4 ನೆಯ ಶತಮಾನದಲ್ಲಿ ರಚಿತವಾದ್ದು. ಈ ಪಟ್ಟಣಕ್ಕೆ ದಂತಿಪುರವೆಂಬುದೂ ಒಂದು ಹೆಸರು.								
(ಎನ್.ಎಲ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ